ಜೀವನವೆಚ್ಚ -
	ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ಅನುಭೋಗಿಗಳು ತಾವು ಬಳಸುವ ಸರಕುಗಳ ಮತ್ತು ಸೇವೆಗಳ ಸಮಷ್ಟಿಯನ್ನು ಕೊಳ್ಳಲು ಪ್ರಚಲಿತ ಬೆಲೆಗಳಲ್ಲಿ ಮಾಡಬೇಕಾಗುವ ವೆಚ್ಚ (ಕಾಸ್ಟ್ ಆಫ್ ಲಿವಿಂಗ್). ವ್ಯಕ್ತಿ ಜೀವಿಸಲು ಹಲವಾರು ವಸ್ತುಗಳ ಅವಶ್ಯಕತೆ ಉಂಟು. ಆದಾಯಕ್ಕೆ ಅನುಗುಣವಾಗಿ ಆತ ಅತ್ಯಾವಶ್ಯಕ, ಸುಖಕರ ಮತ್ತು ಭೋಗ ಅಥವಾ ಮೀಸಲಾದ ಸರಕು ಸೇವೆಗಳನ್ನು ಕೊಳ್ಳುತ್ತಾನೆ. ಇವುಗಳಿಗೆ ಖರ್ಚು ಮಾಡುವ ಹಣ ಅಂದರೆ ಕೊಡುವ ಬೆಲೆಗೆ ಸಂಬಂಧಿಸಿದ ಮಟ್ಟವನ್ನು ಜೀವನವೆಚ್ಚವೆನ್ನಬಹುದು. ಸರಕು ಸೇವೆಗಳ ಬೆಲೆಗಳು ಏರಿದಂತೆ ಜೀವನದ ವೆಚ್ಚ ಹೆಚ್ಚುತ್ತದೆ. ಜೀವನವೆಚ್ಚ ಆದಾಯಕ್ಕಿಂತ ಹೆಚ್ಚಾಗಿದ್ದರೆ ಆಗ ಆರ್ಥಿಕ ಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಇಂಥ ಪರಿಸ್ಥಿತಿ ಕ್ರಮೇಣ ಆರ್ಥಿಕ ಕ್ಷೋಭೆಗೆ ಕಾರಣವಾಗಬಹುದು. ಜೀವನವೆಚ್ಚ ಏರಿದಂತೆ ವ್ಯಾಪಾರೋದ್ಯಮಿಗಳು ಹೆಚ್ಚು ಲಾಭವನ್ನು ಸಂಪಾದಿಸಿಕೊಳ್ಳುತ್ತಾರೆ. ಸಾಲ ಪಡೆಯುವವರು, ವೇತನ, ಕೂಲಿ ಪಡೆದು ಜೀವಿಸುವವರು ತುಂಬ ತೊಂದರೆಗೀಡಾಗುತ್ತಾರೆ. ಏಕೆಂದರೆ ಈ ವರ್ಗಗಳ ಜನರ ಆದಾಯ ಮೊದಲೇ ನಿರ್ಧರಿಸಲ್ಪಟ್ಟಿರುತ್ತದೆ. ಆ ಕ್ಷಣದಲ್ಲಿ ಜೀವನವೆಚ್ಚದ ಏರಿಕೆಗೆ ಅನುಗುಣವಾಗಿ ಅವರ ವೇತನ, ಕೂಲಿದರಗಳು ಏರುವುದಿಲ್ಲ. ಇಂಥ ಅನುಭವ ಜಗತ್ತಿಗೆ ಹೊಸದೇನೂ ಅಲ್ಲ. ಜೀವನವೆಚ್ಚದ ಏರಿಕೆ ಹದಿನಾರನೆಯ ಶತಮಾನದಲ್ಲಿ ಪ್ರಾರಂಭವಾಗಿತ್ತು ಎಂಬುದು ದಾಖಲೆಗಳಿಂದ ಸ್ಪಷ್ಟಪಡಿಸುತ್ತದೆ. ಅನಂತರದ ಶತಮಾನಗಳಲ್ಲಿ ಸಂಭವಿಸಿದ ಯುದ್ಧ ಮತ್ತು ವಿಪ್ಲವಗಳು ಆರ್ಥಿಕ ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಉಂಟುಮಾಡಿದವು. ಇತ್ತೀಚಿನ ಮಹಾಯುದ್ಧಗಳು ಸರಕು ಸೇವೆಗಳ ಬೆಲೆಗಳ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಿದುವು. ಇದರ ಫಲವಾಗಿ ಜೀವನವೆಚ್ಚವೂ ಹೆಚ್ಚುತ್ತಾ ಬಂದಿತು. ಇಂಥ ಬೆಲೆ ಏರಿಕೆ ಅಥವಾ ಜೀವನವೆಚ್ಚದ ಹೆಚ್ಚಳದ ಪ್ರವೃತ್ತಿ ಆರ್ಥಿಕ ಪ್ರಗತಿಯ ಮೇಲೆ ಒಂದಲ್ಲ ಒಂದು ರೀತಿಯ ದುಷ್ಪರಿಣಾಮವನ್ನು ಉಂಟುಮಾಡಿದೆ. ಮಿತಿಮೀರಿ ಏರುತ್ತಿರುವ ಬೆಲೆ ಮಟ್ಟವನ್ನು ಹತೋಟಿಯಲ್ಲಿಡಲು ಹಲವಾರು ಪ್ರಯತ್ನಗಳು ನಡೆಯುತ್ತಲೇ ಇವೆ.

	ಬೆಲೆಗಳ ಏರಿಕೆಯಿಂದ ಜೀವನವೆಚ್ಚ ಹೆಚ್ಚಿದಾಗ ವೇತನ ಮತ್ತು ಕೂಲಿದರಗಳನ್ನು ಕಡಿಮೆ ಮಾಡುವುದರ ಮೂಲಕ ಬೆಲೆ ಮಟ್ಟವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಉದಾಹರಣೆ : ಒಂದನೆಯ ಎಲಿಜûಬೆತ್ ರಾಣಿಯ ಕಾಲದಲ್ಲಿ ಬ್ರಿಟನ್ನಿನಲ್ಲಿ ಜೀವನಮಟ್ಟದ ಹೆಚ್ಚಳವನ್ನು ತಗ್ಗಿಸಲು ವೇತನ ಮತ್ತು ಕೂಲಿ ದರಗಳನ್ನು ಇಳಿಸಲಾಯಿತು. ಇದು ಬಲು ಪರಿಣಾಮಕಾರಿಯಾದ ಮಾರ್ಗವೆನಿಸಿಕೊಂಡಿತು. ಈ ವಿಧಾನದ ಅನುಸರಣೆಯ ಮುಖ್ಯೋದ್ದೇಶ ಜೀವನವೆಚ್ಚವನ್ನು ತಗ್ಗಿಸುವುದರ ಜೊತೆಗೆ ಸುಭಿಕ್ಷ ಮತ್ತು ಅಭಾವ ಕಾಲಗಳೆರಡರಲ್ಲಿಯೂ ವಿವಿಧ ಕೆಲಸಕಾರ್ಯಗಳಿಗೆ ನೇಮಿಸಿಕೊಳ್ಳುವ ನೌಕರ ಮತ್ತು ಕಾರ್ಮಿಕರಿಗೆ ಅನುಕೂಲಕರವಾದ ವೇತನ ಮತ್ತು ಕೂಲಿ ಲಭಿಸಲಿ ಎಂಬುದೇ. ಇದರಿಂದ ಜೀವನವೆಚ್ಚದ ಮಟ್ಟ ಎಲ್ಲರ ಕೈಗೆ ಎಟುಕುವಂತಿರುತ್ತದೆ. ಇದು ಹದಿನೆಂಟನೆಯ ಶತಮಾನದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯವರೆಗೂ ಮುಂದುವರಿಸಿಕೊಂಡು ಬರಲಾಯಿತು. ಇದರ ಪರಿಣಾಮವಾಗಿ ಜೀವನವೆಚ್ಚದಲ್ಲಿ ಹೇಳಿಕೊಳ್ಳುವಂಥ ಏರುಪೇರುಗಳು ಕಾಣಿಸಿಕೊಳ್ಳಲಿಲ್ಲ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಪ್ರಾರಂಭವಾದ ಯುದ್ಧ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಬದಲಾವಣೆಗಳನ್ನು ಉಂಟುಮಾಡಿತು. ಹಾಗೆಯೇ ಜೀವನವೆಚ್ಚದ ಮಟ್ಟವೂ ಏರಿತು.

	1920ರ ತರುವಾಯ ಬೆಲೆಗಳು ಕ್ರಮೇಣ ಇಳಿಯತೊಡಗಿದುವು. ಇದನ್ನು ಅನುಸರಿಸಿ ವೇತನ ಮತ್ತು ಕೂಲಿದರಗಳನ್ನು ಇಳಿಸುವ ಪ್ರಯತ್ನ ನಡೆಯಿತು. ಆದರೆ ಕಾರ್ಮಿಕರು ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಅಮೆರಿಕ ದೇಶದಲ್ಲಿ ಪ್ರಥಮ ಬಾರಿಗೆ ಜೀವನವೆಚ್ಚದಲ್ಲಿ ಬದಲಾವಣೆ ತರುವುದಕ್ಕೆ ಬದಲಾಗಿ ಮೂಲವೇತನ ವೆಚ್ಚದ ಆಯವ್ಯಯದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಯಿತು. ಅಂದರೆ, ಇದರ ಪ್ರಕಾರ ಪ್ರತಿಯೊಬ್ಬ ಕಾರ್ಮಿಕನಿಗೆ ಲಭಿಸುವ ಪದಾರ್ಥಗಳ ಕನಿಷ್ಠ ಪ್ರಮಾಣವನ್ನು ಗೊತ್ತುಪಡಿಸುವ ಪದ್ಧತಿ ಜಾರಿಗೆ ಬರುವಂತೆ ಒತ್ತಾಯಪಡಿಸಲಾಯಿತು. ಹೀಗೆ ಜಾರಿಗೆ ಬಂದ ಈ ಪದ್ಧತಿಯ ಇತಿಹಾಸ ಇಲ್ಲಿಗೆ ಮುಗಿಯಲಿಲ್ಲ. ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಈ ಪದ್ಧತಿಗೆ ಅನುಗುಣವಾಗಿ ಪರಿಷ್ಕರಿಸಬೇಕಾಗಿ ಬಂತು. ಇದರ ಫಲವಾಗಿ ಅಮೆರಿಕ ಮತ್ತು ಯೂರೋಪುಗಳಲ್ಲಿ ವೇತನವನ್ನು ಜೀವಿತವೇತನ ಮಟ್ಟದ ಸಮೀಪಕ್ಕೆ ಏರಿಸಲಾಯಿತು. ಆದರೆ ಅಮೆರಿಕದ ಶ್ರೇಷ್ಠನ್ಯಾಯಾಲಯ ಈ ಶಾಸನದ ವಿರುದ್ಧ ತೀರ್ಪನ್ನು ಕೊಟ್ಟಿತು. ಇದರಿಂದಾಗಿ ಮನೆಮಾರುಗಳಿಂದ ದೂರದಲ್ಲಿ ವಾಸಿಸುವ ಹೆಂಗಸರಿಗೆ ಮಾತ್ರ ಜೀವನವೆಚ್ಚದ ಶಾಸನದ ಪ್ರಯೋಜನ ಲಭಿಸುತ್ತದೆ ಎಂದು ಗೊತ್ತುಮಾಡಲಾಯಿತು. ಅಂದರೆ ಶ್ರೇಷ್ಠನ್ಯಾಯಾಲಯದ ತೀರ್ಪಿನ ಪ್ರಕಾರ ದೂರಪ್ರದೇಶದಲ್ಲಿರುವ ಹೆಂಗಸರಿಗೆ ಅಗತ್ಯ ಜೀವನವೆಚ್ಚ ಮತ್ತು ಆರೋಗ್ಯ ವೆಚ್ಚಗಳು ಸಿಗುವಂತಾಯಿತು. ಆಸ್ಟ್ರೇಲಿಯದಲ್ಲೂ ಇದೇ ರೂಪರೇಖೆಯನ್ನು ಒಳಗೊಂಡ ಕುಟುಂಬ ವೆಚ್ಚ ಸಾಧಾರಣ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿತು.

	ಅರ್ಥಶಾಸ್ತ್ರದಲ್ಲಿ ಪ್ರಸ್ತಾವಿಸಿರುವಂತೆ ಸಾಮಾನ್ಯವಾಗಿ ವೇತನ ನಿರ್ಧಾರ ಹೆಚ್ಚು ಕಡಿಮೆ ಕಾರ್ಮಿಕಜೀವನ ಮಟ್ಟಕ್ಕೆ ಸರಿಹೋಗುವಂತಿರುತ್ತದೆ. ಆದರೆ ಖ್ಯಾತ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೊ ಜೀವಿಸಿದ್ದ ಕಾಲದಲ್ಲಿ ವೇತನ ಕೇವಲ ಸಾಮಾನ್ಯ ಜೀವನ ನಡೆಸುವುದಕ್ಕೆ ಸಾಕಾಗುತ್ತಿತ್ತೇನೋ ಎಂಬುದರಲ್ಲಿ ಸತ್ಯಾಂಶವಿದೆ. ಆದರೆ ಈಗ ಪರಿಸರ ಉತ್ಪಾದನೆ ಮತ್ತು ಜೀವನಮಟ್ಟ ಇವೆರಡರ ನಡುವೆ ವೇತನ ದರವನ್ನು ನಿರ್ಧರಿಸುವುದು ಸರ್ವಥಾ ಸಾಧುವಾದ ಮಾರ್ಗವಾಗಿದೆ ಎಂಬುದು ಈಗಿನ ಅರ್ಥಶಾಸ್ತ್ರಾಭ್ಯಾಸಿಗಳ ಅಭಿಪ್ರಾಯವಾಗಿದೆ. ಇದನ್ನು ಅನುಸರಿಸಿಯೇ ಜೀವನವೆಚ್ಚವನ್ನು ನಿರ್ಧರಿಸುವುದು ಆಯಾ ದೇಶಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ ದೃಷ್ಟಿಯಿಂದ ತುಂಬ ಸಮರ್ಪಕವಾದ ವಿಧಾನವೆನಿಸುತ್ತದೆ. ಜೀವನವೆಚ್ಚವನ್ನು ನಿರ್ಧರಿಸುವಾಗ ಪ್ರತಿಕುಟುಂಬದ ಮೂಲ ಆಯವ್ಯಯಾಂಶಗಳನ್ನು ಸಂಗ್ರಹಿಸಿಕೊಳ್ಳಬೇಕಾದುದು ಅತ್ಯಗತ್ಯ. 1830-40ರ ಅವಧಿಯಲ್ಲಿ ಲಿಪ್ಲೆ ಎಂಬಾತ ಈ ವಿಧಾನವನ್ನು ಅಳವಡಿಸಿಕೊಂಡು ಯೂರೋಪಿನ ಕೆಲವು ದೇಶಗಳಲ್ಲಿ ಕಾರ್ಮಿಕ ಕುಟುಂಬಗಳ ಜೀವನವೆಚ್ಚ ಮಾಹಿತಿಯನ್ನು ಸಂಗ್ರಹಿಸಿದ. ಇದಕ್ಕೆ ಸಂಬಂಧಿಸಿದ ಅಂಕೆಅಂಶಗಳ ಕ್ರೋಢೀಕರಣದಲ್ಲಿ ತ್ವರಿತ ಸಮೀಕ್ಷಾ ಪದ್ಧತಿಯನ್ನು ಅವನು ಅಳವಡಿಸಿಕೊಂಡ. ಪ್ರತಿಯೊಂದು ಕಾರ್ಮಿಕ ಕುಟುಂಬದ ಜೀವನವೆಚ್ಚದ ವಿವರವನ್ನು ಪ್ರಶ್ನಾವಳಿ ಮತ್ತು ದಾಖಲೆ ಪುಸ್ತಕಗಳ ಮೂಲಕ ಸಂಗ್ರಹಿಸಿದ. ಹೀಗೆ ಲಿಪ್ಲೆಯ ಸಮೀಕ್ಷಾಪದ್ಧತಿ ವೈಯಕ್ತಿಕ ಕಾರ್ಮಿಕ ಕುಟುಂಬದ ಜೀವನವೆಚ್ಚದ ಪೂರ್ಣ ಮಾಹಿತಿಯನ್ನು ಒದಗಿಸಿಕೊಡುವುದಲ್ಲಿ ಬಲು ಸಹಾಯಕಾರಿಯಾಯಿತು. 1795ರಲ್ಲಿ ಎಫ್.ಎಂ.ಈಡನ್ ಎಂಬಾತ ಇಂಗ್ಲೆಂಡಿನ ಗ್ರಾಮಾಂತರ ಪ್ರದೇಶದ ಬಡಜನರ ಸ್ಥಿತಿಗತಿಗಳನ್ನು ತಿಳಿಯುವ ಉದ್ದೇಶದಿಂದ ಒಂದು ಸಮೀಕ್ಷೆಯನ್ನು ನಡೆಸಿದ. ಇದು ವ್ಯಾಪಕ ಸಮೀಕ್ಷಾಪದ್ಧತಿಯಾಗಿದ್ದುದರಿಂದ ಇದರ ಜಾಡಿನಲ್ಲಿಯೇ 1850ರಲ್ಲಿ ಸಂಖ್ಯಾಕಲನಶಾಸ್ತ್ರಜ್ಞರು ಮತ್ತೊಂದು ಸಮೀಕ್ಷೆಯನ್ನು ನಡೆಸಿ ಜೀವನಮಟ್ಟದ ಬಗ್ಗೆ ಸರ್ಕಾರಕ್ಕೆ ಒಂದು ವರದಿಯನ್ನು ಸಲ್ಲಿಸಿದರು. ಅರ್ಲೆಸ್ಟ್ ಎಂಗೆಲ್ ಎಂಬಾತ ಪ್ರಷ್ಯದಲ್ಲಿ ಇಂಥ ಸಮೀಕ್ಷೆಯನ್ನು ನಡೆಸಿದ. ಇದರಲ್ಲಿ ಶಿಶುವಿನಿಂದ ವಯಸ್ಕರವರೆಗೆ ಮತ್ತು ಕುಟುಂಬದ ಪ್ರತಿಯೊಂದು ವ್ಯಕ್ತಿಗೆ ಸಂಬಂಧಿಸಿದ ವಾರ್ಷಿಕ ಜೀವನವೆಚ್ಚದ ವಿವರಗಳು ಕಲೆಹಾಕಲಾಗಿತ್ತು. ಇದರ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತಪಟ್ಟರೂ ಈ ಸಮೀಕ್ಷೆ ವಿವಿಧ ದರ್ಜೆಯ ಕುಟುಂಬಗಳ ಜೀವನವೆಚ್ಚವನ್ನು ಶೋಧಿಸಲು ಹೆಚ್ಚು ಉಪಯುಕ್ತವಾಗಿತ್ತು ಎಂಬುದನ್ನು ಮರೆಯುವ ಹಾಗಿಲ್ಲ.

	ಇದೇ ಅವಧಿಯಲ್ಲಿ ಅಮೆರಿಕದ ಜೀವನವೆಚ್ಚ ಕ್ರಮವನ್ನು ಅಂದರೆ ಅಟ್‍ವಾಟರ್ ಆಹಾರ ಅನುಭೋಗದ ವಿಧಾನವನ್ನು ಅನುಸರಿಸಲಾಯಿತು. ಇದರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಆಹಾರವನ್ನು ತೆಗೆದುಕೊಳ್ಳುತ್ತಾನೊ ಅದರ ಆಧಾರದ ಮೇಲೆ ಜೀವನವೆಚ್ಚ ನಿರ್ಧರಿಸಲ್ಪಡುತ್ತದೆ. ಸೈಡನ್ ಸ್ಟ್ರಿಕರ್ ಮತ್ತು ಕಿಂಗ್ ಅವರು ಪ್ರತಿಯೊಂದು ವ್ಯಕ್ತಿಗೂ ಅಗತ್ಯವಾದ ಆಹಾರ, ಬಟ್ಟೆ, ವಸತಿಗಳ ಜೊತೆಗೆ ಮನೋರಂಜನೆ, ಕ್ರೀಡೆ ಇವನ್ನು ಗಣನೆಗೆ ತೆಗೆದುಕೊಂಡು ಜೀವನವೆಚ್ಚವನ್ನು ನಿರ್ಧರಿಸಿದರು. ಇದರಿಂದ ಅಟ್‍ವಾಟರ್ ಆಹಾರ ಅನುಭೋಗ ವಿಜ್ಞಾನದಲ್ಲಿ ಸುಧಾರಣೆ ಆಯಿತು. ಇವುಗಳಲ್ಲದೆ ಅಮೆರಿಕ ಇನ್ನೂ ಹಲವಾರು ವ್ಯಕ್ತಿ ಮತ್ತು ಸಂಸ್ಥೆಗಳು ಜೀವನಮಟ್ಟ ನಿರ್ಧರಿಸುವ ಸಮೀಕ್ಷೆಗಳನ್ನು ಕೈಗೊಂಡಿದ್ದರು. ಉದಾಹರಣೆಗೆ ಕರೋಲ್ ಡಿ.ರೈಟ್ ಎಂಬಾತನ ಮಾರ್ಗದರ್ಶನದಲ್ಲಿ ಮ್ಯಾಸಾಚುಸೆಟ್ಸ್ ಕಾರ್ಮಿಕ ಸಂಸ್ಥೆ ಮತ್ತು ಕಾರ್ಮಿಕ ಅಂಕೆ ಅಂಶಗಳ ಸಂಸ್ಥೆಗಳು ಜೀವನವೆಚ್ಚವನ್ನು ನಿರ್ಧರಿಸುವಾಗ ಆಹಾರ ಪ್ರಮಾಣದಿಂದ ಕುಟುಂಬ ಗಾತ್ರವನ್ನು ಶೋಧಿಸುವುದು ಅತ್ಯಾವಶ್ಯಕ ಎಂದು ಅಭಿಪ್ರಾಯಪಟ್ಟವು. 1890 ಮತ್ತು 1901ರಲ್ಲಿ ಅನುಕ್ರಮವಾಗಿ ಲಂಡನ್ ಮತ್ತು ನ್ಯೂಯಾರ್ಕ್ ಪಟ್ಟಣಗಳಲ್ಲಿ ಬಡತನದ ಬಗ್ಗೆ ಬೂತ್ ಮತ್ತು ರೌನ್‍ಟ್ರೀ ಅವರು ಸಮೀಕ್ಷೆಗಳನ್ನು ನಡೆಸಿದರು. ಇವು ಕಾರ್ಮಿಕ ವರ್ಗದವರಲ್ಲೆ ಹೆಚ್ಚಾಗಿ ಬಡತನವಿರುವುದು ಎಂದು ಸ್ಪಷ್ಟಪಡಿಸಿದುವು. ಶ್ರೀಮತಿ ಮೂರ್ ಮತ್ತು ಜಾಪಿನ್ ಎಂಬುವರು 1907 ಮತ್ತು 1909ರಲ್ಲಿ ನ್ಯೂಯಾರ್ಕಿನಲ್ಲಿಯೂ ಕೆನ್ನಡಿ ಎಂಬಾತ 1914ರಲ್ಲಿ ಷಿಕಾಗೋದಲ್ಲಿಯೂ ಬಡತನದ ಜೀವನಮಟ್ಟವನ್ನು ಶೋಧಿಸಲು ಸಮೀಕ್ಷೆಗಳನ್ನು ನಡೆಸಿದರು. ಇವುಗಳಲ್ಲಿ ಸಾಮಾನ್ಯ ಮತ್ತು ಒಳ್ಳೆಯ ಎಂಬ ಪದಗಳನ್ನು ಬಳಸಿ ಪ್ರತಿ ಕುಟುಂಬದ ಜೀವನವೆಚ್ಚದ ಮಟ್ಟವನ್ನು ಅಳೆದರು. ಇಂಥ ಹಲವಾರು ವಿಧಾನ ಮತ್ತು ಸಮೀಕ್ಷೆಗಳು ವಿವಿಧ ವರ್ಗದ ಕುಟುಂಬಗಳ ಜೀವನಮಟ್ಟ ಮತ್ತು ವೆಚ್ಚಗಳ ಅಂದಾಜನ್ನು ತಿಳಿದುಕೊಳ್ಳಲು ಬಲು ಉಪಯುಕ್ತವಾದ ಮಾರ್ಗಗಳೆನಿಸಿಕೊಂಡುವು.

	ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ವರ್ಗಕ್ಕೆ ಸೇರಿದ ಭಾರತದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಜೀವನವೆಚ್ಚ ಮಿತಿಮೀರಿ ಏರುತ್ತಿದೆ. ಇದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆ ಮತ್ತು ಹೆಚ್ಚು ಮೊತ್ತದ ಹಣದ ಸರಬರಾಜು. ಪಂಚವಾರ್ಷಿಕ ಯೋಜನೆಗಳನ್ನು ಕಾರ್ಯಗತ ಮಾಡಲು ಅಪಾರ ಹಣ ಅಗತ್ಯ. ಇದು ಅನಿವಾರ್ಯವಾಗಿ, ಪರೋಕ್ಷವಾಗಿ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಅನುಭೋಗದ ಮಟ್ಟ ಹಾಗೂ ಜೀವನವೆಚ್ಚವನ್ನು ಏರಿಸುತ್ತದೆ. ಪ್ರತಿಯೊಂದು ವಸ್ತುವಿನ ಬೆಲೆ (ಅತ್ಯಾವಶ್ಯಕ, ಸುಖಕರ ಹಾಗೂ ಭೋಗ ಅಥವಾ ವಿಲಾಸ ವಸ್ತುಗಳು) ಒಂದೇ ಸಮನೆ ಏರುತ್ತ ಬಂದಿದೆ.
(ಕೆ.ಆರ್.ಎನ್.)

	ಸಂಖ್ಯಾಕಲನಶಾಸ್ತ್ರದ ದೃಷ್ಟಿ : ಜೀವನವೆಚ್ಚದ ಮಾನವನ್ನು ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ (1945) ಬಳಕೆದಾರನ ಬೆಲೆಸೂಚಿ (ಕನ್ಸ್ಯೂಮರ್ ಪ್ರೈಸ್ ಇಂಡಕ್ಸ್) ಎಂದೂ ಬ್ರಿಟನ್ನಿನಲ್ಲಿ (1947) ಚಿಲ್ಲರೆವ್ಯಾಪಾರ ಬೆಲೆಗಳ ಸೂಚಿ (ಇಂಡೆಕ್ಸ್ ಆಫ್ ರೀಟೇಲ್ ಪ್ರೈಸಸ್) ಎಂದೂ ಅಧಿಕೃತವಾಗಿ ಮರು ಹೆಸರಿಸಲಾಗಿದೆ. ಒಂದು ಆಧಾರವರ್ಷಕ್ಕೆ ಅನುರೂಪವಾದ ವಸ್ತುಗಳ ಆಯ್ದಪಟ್ಟಿಯ ಬೆಲೆಯ ಬದಲಾವಣೆಯನ್ನು ಅಳೆಯಲು ಬಳಕೆದಾರನ ಬೆಲೆಸೂಚಿ ರಚಿತವಾಗಿದೆ. ಲಸ್ಪೇರ್ಸ್ ಸೂತ್ರ ಅದರ ತಳಹದಿ: ಆಧಾರವರ್ಷದಲ್ಲಿ ಬಳಸಲಾದ ಸರಾಸರಿ ಪರಿಮಾಣವನ್ನು  ಅಂದಿನ ಬೆಲೆಯನ್ನು ಮತ್ತು ಚಾಲ್ತಿ ಬೆಲೆಯನ್ನು ಎಂದು ಪ್ರತೀಕಿಸಿದರೆ ಆಗ

ಇಲ್ಲಿರುವ ಬದಲು ಚಾಲ್ತಿವರ್ಷದ ಸರಾಸರಿ ಪರಮಾಣ  ನ್ನು ಬಳಸಿದಾಗ ಪಾಷೆ ಸೂತ್ರ ದೊರೆಯುತ್ತದೆ. ಈ ಎರಡು ಸೂತ್ರಗಳ ಪೈಕಿ ಮೊದಲನೆಯದು ತಿಳಿಸುವ ಬೆಲೆಯೇರಿಕೆ ಹೆಚ್ಚಿರುವ ಪ್ರವೃತ್ತಿಯಿದೆ. ರಷ್ಯನ್ ಭಾಷೆಯಲ್ಲಿ ಪ್ರಕಟವಾದ (1924) ಒಂದು ಲೇಖನದಲ್ಲಿ ಕೊನ್ಯಸ್ ಎಂಬಾತ ಜೀವನವೆಚ್ಚದ ನಿಜವಾದ ಸೂಚಿಯೆಂದರೆ ಬೆಲೆಗಳನ್ನು ಕುರಿತು ಮಾತ್ರ ಭಿನ್ನವಾಗಿರುವ ಎರಡು ಪರಿಸ್ಥಿತಿಗಳಲ್ಲಿ ಸಮಜೀವನಮಟ್ಟ ನೀಡುವ ಹಣದ ಖರ್ಚುಗಳ ನಿಷ್ಪತ್ತಿಯೆಂಬ ವಿಚಾರವನ್ನು ಮುಂದಿರಿಸಿದ. ಕೆಲವು ನಿರ್ಬಂಧಗಳು ತೃಪ್ತವಾದಾಗ ಲಸ್ಟೇರ್ಸ್ ಸೂಚಿ ಜೀವನವೆಚ್ಚಕ್ಕೆ ಒಂದು ಮೇಲುಮಿತಿಯನ್ನು ಉಳದ ಸಂದರ್ಭಗಳಲ್ಲಿ ಪಾಷೆಸೂಚಿ ಆ ವೆಚ್ಚಕ್ಕೆ ಒಂದು ಕೆಳಮಿತಿಯನ್ನೂ ನೀಡುತ್ತವೆ. ಆದರೆ ಇವೆರಡೂ ಏಕಕಾಲದಲ್ಲಿ ಮಾತ್ರ ಮೇಲಿನ ಮತ್ತು ಕೆಳಗಿನ ಮಿತಿಗಳನ್ನು ನೀಡುವುದಿಲ್ಲವೆಂದು ಕೊನ್ಯಸ್ ತೋರಿಸಿದ್ದಾನೆ.

	ಜೀವನವೆಚ್ಚದ ಅಥವಾ ಚಿಲ್ಲರೆವ್ಯಾಪಾರ ಬೆಲೆಗಳ ಮಟ್ಟದ ಎಲ್ಲ ಮಾಪನಗಳೂ ಒಂದು ಖಚಿತ ಜಾಗ ಅಥವಾ ವಿಸ್ತೀರ್ಣದಲ್ಲಿ ಬಳಕೆವಸ್ತು ಮತ್ತು ಸೇವೆಗಳ ನಿರ್ದಿಷ್ಟ ಸಮುದಾಯವನ್ನು ಚಾಲ್ತಿ ಬೆಲೆಗಳಲ್ಲಿ ಕೊಳ್ಳುವ ಖರ್ಚಿನ ಗಣನೆಗೆ ಸಂಬಂಧಿಸಿವೆ. ಜನರ ನಿರ್ದಿಷ್ಟ ವರ್ಗ ತನ್ನ ಆರೋಗ್ಯ, ದೇಹ ಬಲಗಳನ್ನು ಕಾಪಾಡಿಕೊಳ್ಳಲು ಅತ್ಯಂತ ಕಡಿಮೆಯೆಂದರೆ ಅವಶ್ಯವೆಂದು ಮನ್ನಣೆ ಪಡೆದ ಅಧಿಕಾರದಿಂದ ಪರಿಗಣಿತವಾಗಿರುವ ವಸ್ತುಗಳ ಸಮುದಾಯ ಇದಾಗಿರಬಹುದು; ಅಥವಾ ಹೆಚ್ಚು ಸಾಮಾನ್ಯವಾಗಿ ಅನುಭವದಿಂದ ಕಂಡುಬರುವಂತೆ ದತ್ತ ವಿಭಾಗದಲ್ಲಿರುವ ನಿರ್ದಿಷ್ಟ ವರ್ಗದ ಜನರು ಸ್ವಾಭಾವಿಕವಾಗಿ ತಮ್ಮ ಆದಾಯವನ್ನು ಖರ್ಚು ಮಾಡುವ ಅಥವಾ ಮಾಡಿರುವ ವಸ್ತು ಮತ್ತು ಸೇವೆಗಳ ಸಮುದಾಯ ಇದಾಗಿರಬಹುದು. ಅಂಥ ಮಾಪನಗಳ ಉದ್ದೇಶ ಮತ್ತು ಆ ಮಾಪನಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಕೆಳಗೆ ಸ್ಥೂಲವಾಗಿ ವಿವರಿಸಲಾಗಿದೆ. ಆದರೆ ಯಾವುದೇ ಇಂಥ ಮಾಪನ ಹೆಚ್ಚೆಂದರೆ ಒಂದು ಸನ್ನಿಹಿತ ಮೌಲ್ಯವನ್ನು ಮಾತ್ರ ಕೊಡಬಲ್ಲದೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಯ್ದ ದೇಶಗಳಲ್ಲಿ ಜೀವನವೆಚ್ಚದ ಸಾಪೇಕ್ಷ ಚಲನೆಯನ್ನು ತೋರಿಸುವ ಕೋಷ್ಟಕವನ್ನು ಕೊನೆಯಲ್ಲಿ ಕೊಟ್ಟಿದೆ.

ಉದ್ದೇಶಗಳು : 1. ಜೀವನವೆಚ್ಚಮಾಪನದ ಮೊತ್ತಮೊದಲ ಉದ್ದೇಶ ಮುಖ್ಯವಾಗಿ ಬಡತನದ ಇರುವಿಕೆಗೆ ಸಂಬಂಧಿಸಿತ್ತು. ಇದಕ್ಕೆ ವೆಚ್ಚದ ನಿರಪೇಕ್ಷ ಮಾಪನ ಬೇಕು. ಆದರೆ ಬರಬರುತ್ತಾ ಯಾವುದೋ ವಸ್ತುಸ್ಥಿತಿಗೆ ಹೋಲಿಸಿದಂತೆ ಸಾಪೇಕ್ಷ ಮಾಪನ ಪ್ರಚಲಿತವಾಯಿತು. ದತ್ತ ಗಾತ್ರದ ಕುಟುಂಬ ತನ್ನ ಆರೋಗ್ಯ ಕಾರ್ಯದಕ್ಷತೆಗಳನ್ನು ಉಳಿಸಿಕೊಳ್ಳಲು ಬೇಕಾಗುವ ಸರಕು ಸೇವೆಗಳನ್ನು ನಿಗದಿಗೊಳಿಸಿ ಚಾಲ್ತಿಬೆಲೆಗಳಲ್ಲಿ ಇವುಗಳ ವೆಚ್ಚವನ್ನು ಗಣಿಸಲಾಗುತ್ತಿತ್ತು. ಆರ್ಥಿಕಶಿಸ್ತನ್ನು ಪಾಲಿಸುತ್ತಿರುವಾಗಲೂ ಅಂಥ ಕುಟುಂಬಕ್ಕೆ ಜೀವನದ ಅತ್ಯಾವಶ್ಯಕತೆಗಳನ್ನು ಪಡೆಯಲು ಬೇಕಾದ ಕನಿಷ್ಠ ಆದಾಯವನ್ನು ಈ ಸಂಖ್ಯೆ ತಿಳಿಸುತ್ತದೆ. ಯಾವುದೇ ಕುಟುಂಬದ ಆದಾಯ ಈ ಕನಿಷ್ಠ ಮಟ್ಟಕ್ಕಿಂತ ಕೆಳಗಿರುವಾಗ ಅಂಥ ಕುಟುಂಬ ಆದಾಯ ಕಡಿಮೆ ಇದ್ದುದರಿಂದಾಗಿಯೇ ಬಡತನದಲ್ಲಿ ಜೀವಿಸುತ್ತಿದೆ ಎನ್ನಬಹುದು. ಬೆಂಜಮಿನ್ ಸೀಬೋಮ್ ರೌನ್‍ಟ್ರೀ ಮತ್ತು ಆರ್ಥರ್ ಬೋಲಿಯವರಂಥ ಮುಂದಾಳುಗಳು ಜೀವನವೆಚ್ಚದ ಬಳಕೆ ಮಾಡಿಕೊಂಡ ಬಗೆ ಸ್ಥೂಲವಾಗಿ ಇದು. ಆದರೆ ದುರಾದೃಷ್ಟವಶಾತ್ ಕನಿಷ್ಠಮಟ್ಟದ ಪರಿಕಲ್ಪನೆ ಅಸ್ಪಷ್ಟವಾದುದು. ಆಹಾರ ಪದಾರ್ಥಗಳ ಸಂಬಂಧದಲ್ಲಿ ಅವಶ್ಯಕತೆಗಳನ್ನು ಕೆಲೊರಿ ಮೌಲ್ಯದಲ್ಲಿ ಅಂದಾಜಿಸುವುದು ಕಷ್ಟಸಾಧ್ಯ. ಅದಲ್ಲದೆ ವಸತಿ, ಅಲ್ಲಿರಬೇಕಾದ ಮೇಜು, ಕುರ್ಚಿ ಇತ್ಯಾದಿ ಸರಂಜಾಮುಗಳ ಮಟ್ಟಿಗೆ ಅನಿವಾರ್ಯತೆಗಿಂತಲೂ ಹೆಚ್ಚಾಗಿ ಪದ್ಧತಿಗಳನ್ನೇ ಲಕ್ಷ್ಯದಲ್ಲಿರಿಸಿಕೊಂಡು ನಿರ್ಧರಿಸುವುದು ಸೂಕ್ತ. ಅವಶ್ಯವಿರುವ ಕನಿಷ್ಟ ಕೆಲೊರಿಮೌಲ್ಯ, ಶರ್ಕರಪಿಷ್ಠ ಮತ್ತು ಪ್ರೋಟೀನುಗಳ ಪರಿಮಾಣಗಳನ್ನು ಆಹಾರದ ತಳಹದಿ ಎಂದು ಬಳಸಿಕೊಳ್ಳಬಹುದಾದರೂ ಸಂಬಂಧಿಸಿದ ವ್ಯಕ್ತಿಗಳು ನಿರತರಾಗಿರುವ ಕೆಲಸವನ್ನು ಹೊಂದಿಕೊಂಡು ಈ ಅವಶ್ಯಕತೆಗಳು ಏರಿಳಿಯುತ್ತಿರುತ್ತವೆ. ಆದರೆ ಈ ಅಡಚಣೆಗಳಿರುವಾಗಲೂ ಮೇಲಿನ ವಿಚಾರಗಳ ಬಳಕೆ ಅದೂ ಬಡತನದ ಸಮಸ್ಯೆಯ ಮೇಲೆ ಲಕ್ಷ್ಯ ಹರಿಸಲು ಕಾರಣವಾಗುವುದರಿಂದ ಪೂರ್ಣವಾಗಿ ಉಪಯುಕ್ತವಾಗಿದೆ.

2. ಯಾವುದೇ ಆಧಾರವರ್ಷದಲ್ಲಿ ಜನರ ನಿರ್ದಿಷ್ಟವರ್ಗ ಪದ್ಧತಿಯಂತೆ ಕೊಳ್ಳುತ್ತ್ತಿದ್ದ ಸರಕು, ಸೇವೆಗಳ ಸಮುದಾಯದ ಮೇಲೆ ಚಿಲ್ಲರೆ ವ್ಯಾಪಾರ ಬೆಲೆಗಳಲ್ಲಿ ಬದಲಾವಣೆಗಳ ಪರಿಣಾಮವನ್ನು ಒಂದು ಕಾಲಾವಧಿಯಲ್ಲಿ ಹೋಲಿಸುವುದು. ಉದಾಹರಣೆಗೆ, ಬ್ರಿಟನ್ನಿನಲ್ಲಿ ಕಾರ್ಮಿಕವರ್ಗದ ಕುಟುಂಬಗಳು 1904ರಲ್ಲಿ ಪದ್ಧಯಂತೆ ಕೊಳ್ಳುತ್ತಿದ್ದ ಸರಕುಗಳ ಸಮುದಾಯದ ವೆಚ್ಚದಲ್ಲಿ 1914ರ ಬಳಿಕ ಆದ ಬದಲಾವಣೆಗಳನ್ನು ಗಣಿಸುವುದು 1947ರವರೆಗೆ ರೂಢಿಯಲ್ಲಿತ್ತು. ಕಾಲಗತಿಯೊಂದಿಗೆ ಇಂಥ ಸಮುದಾಯ ಮೊದಲಲ್ಲಿ ಪರಿಗಣಿಸಲಾಗಿದ್ದ ವರ್ಗದ ಖರ್ಚನ್ನು ಪ್ರತಿನಿಧೀಕರಿಸದಷ್ಟು ಹಳೆಯದಾಗಿ ಬಿಡಬಹುದೆಂಬ ನಿಜಸ್ಥಿತಿಯನ್ನು ಈ ವಿಧಾನ ನಿರ್ಲಕ್ಷಿಸುತ್ತದೆ. ಖರ್ಚಿನ ಸ್ವರೂಪದಲ್ಲಿ ಇಂಥ ಬದಲಾವಣೆಗೆ ನಾಲ್ಕು ಮುಖ್ಯ ಕಾರಣಗಳನ್ನು ಪ್ರತ್ಯೇಕಿಸಬಹುದು :

(i) ವಸ್ತುಗಳ ಬೆಲೆ ಬದಲಾಗುತ್ತಿರುವಾಗ ದುಬಾರಿಯಾಗುತ್ತಿರುವ ವಸ್ತುಗಳ ಸ್ಥಾನದಲ್ಲಿ ಅಗ್ಗವಾಗುತ್ತಿರುವ ವಸ್ತುಗಳನ್ನು ಆದೇಶಿಸುವ ಪ್ರವೃತ್ತಿ.

(ii) ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಬರುವುದು ಮತ್ತು ಹಳೆಯ ಮಾದರಿಯ ವಸ್ತುಗಳ ಉತ್ಪಾದನೆ ಸ್ಥಗಿತವಾಗುವುದು ಅಥವಾ ಇಳಿಮೊಗವಾವುದು.

(iii) ಸಾಮಾಜಿಕ ಬಲಗಳು ಜನರ ಅಭಿರುಚಿಗಳಲ್ಲಿ ಪುರೋಗಾಮಿ ಬದಲಾವಣೆಗಳನ್ನು ಉಂಟುಮಾಡುವುದು. 

(iv) ಗಣನೆಗೆ ಸಂಬಂಧಿಸಿದ ಜನರ ಆರ್ಥಿಕವರ್ಗವನ್ನು ದೈಹಿಕ ಕೆಲಸಗಾರರು, ಉದ್ಯೋಗಿಗಳು ಅಥವಾ ಕೃಷಿಕೆಲಸಗಾರರು ಎಂದು ವ್ಯಾಖ್ಯಿಸಿದರೆ ಆಗ ಪ್ರತಿಯೊಂದು ವಸ್ತುವನ್ನು ಇನ್ನೂ ಹೆಚ್ಚಿನ ಪರಿಮಾಣದಲ್ಲಿ ಕೊಳ್ಳಲು ತನ್ನ ಆದಾಯ ಅನುಮಾಡಿಕೊಡುವುದೆಂದು ಆ ವರ್ಗ ಕಾಲಾನುಕ್ರಮದಲ್ಲಿ ಕೊಂಡುಕೊಳ್ಳುವ ಸಾಧ್ಯತೆ.

3. ಜೀವನವೆಚ್ಚ ಮಾಪನದಲ್ಲಿರುವ ಐಚ್ಛಿಕತೆಯ ಕಡೆಗೆ ಈ ಸಾಧ್ಯತೆಗಳು ಲಕ್ಷ್ಯಸೆಳೆಯುತ್ತವೆ. ಚಿಲ್ಲರೆ ವ್ಯಾಪಾರಬೆಲೆಗಳಲ್ಲಿ ಆದ ಮಾರ್ಪಾಡುಗಳಿಂದಾಗಿ ಆರ್ಥಿಕ ಕಲ್ಯಾಣ ಅಥವಾ ತೃಪ್ತಿಯ ಒಂದು ಸ್ಥಿರಮಟ್ಟವನ್ನು ಉಳಿಸಿಕೊಳ್ಳುವ ವೆಚ್ಚದಲ್ಲಾಗುವ ಬದಲಾವಣೆಗಳನ್ನು ಅಳೆಯುವುದು. ಖರ್ಚಿನ ಪ್ರರೂಪದಲ್ಲಿ ಕಾರಣ (i), (ii), (iii) ಗಳಿಂದ ಉಂಟಾದ ಬದಲಾವಣೆಗಳನ್ನು ಗಮನಿಸುವುದು ಈ ಸನ್ನಿವೇಶದಲ್ಲಿ ನಿಜವಾಗಿ ಅವಶ್ಯ. ಪರ್ಯಾಯವಾಗಿ ಜನರ ದತ್ತ ಆರ್ಥಿಕ ವರ್ಗ ಚಾಲ್ತಿಯಾಗಿ ಖರೀದಿಸುವ ವಸ್ತುಸಮುದಾಯದ ವೆಚ್ಚದ ಬದಲಾವಣೆಯ ಮೇಲೆ ಆಸಕ್ತಿ ಕೇಂದ್ರೀಕೃತವಾಗಿರಬಹುದು. ಅಂದರೆ ಕೆಲಸಮಯದ ಮೊದಲು ಅದೇ ವರ್ಗ ತನ್ನ ಮಿತ ಆದಾಯದಿಂದಾಗಿ ಈಗಿರುವುದಕ್ಕಿಂತ ಚಿಕ್ಕ ಸಮುದಾಯವನ್ನು ಖರೀದಿಸುವಂತೆ ನಿರ್ಬಂಧಿತವಾಗಿತ್ತೆಂಬ ವಿಚಾರವನ್ನು ನಿರ್ಲಕ್ಷಿಸುವುದು. ಈ ಸಂದರ್ಭದಲ್ಲಿ ಖರ್ಚಿನ ಪ್ರರೂಪವನ್ನು ಬದಲಾಯಿಸುವ ನಾಲ್ಕೂ ಕಾರಣಗಳನ್ನು ಗಮನಿಸುವುದು ಅಗತ್ಯ. ಜೀವನ ವೆಚ್ಚಮಾಪನದ ಮೂರನೆಯ ಉದ್ದೇಶವಿದು.

	ಆರ್ಥಿಕತೃಪ್ತಿಯ ಸ್ಥಿರಮಟ್ಟವನ್ನು ಒದಗಿಸುವ ವಸ್ತು ಮತ್ತು ಸೇವೆಗಳ ವೆಚ್ಚವನ್ನು ಅಳೆಯುವ ವ್ಯಾವಹಾರಿಕ ಉಪಾಯವಿಲ್ಲದಿರುವುದು ಒಂದು ದುರದೃಷ್ಟ. ಅಂಥ ಮಟ್ಟಕ್ಕೆ ಅನುರೂಪವಾದ ಖರ್ಚಿನ ಪ್ರರೂಪವನ್ನು ತಿಳಿಯಲು, ಉದ್ದೇಶಿತ ತೃಪ್ತಿ ನೀಡಲು ಅವಶ್ಯವಿರುವ ಹಣ ಆದಾಯದ ಮಾಹಿತಿ ಬೇಕು. ಚಿಲ್ಲರೆ ವ್ಯಾಪಾರ ಬೆಲೆಗಳ ಮಟ್ಟದ ಪೂರ್ವಜ್ಞಾನವಿಲ್ಲದೆ ಇದನ್ನು ಗಣಿಸುವುದು ಅಸಾಧ್ಯ. ಆದರೆ ಹುಡುಕಲ್ಪಡುವ ಅವ್ಯಕ್ತ ಇದೇ. ಇದೊಂದು ಸುಳಿ. ಹೀಗಾಗಿ ವರ್ಷವರ್ಷವೂ ವಸ್ತುಗಳ ಒಂದು ಸ್ಥಿರ ಸಮುದಾಯದ ಬೆಲೆ ನಿರ್ಧರಿಸುವ ಹಾಗೂ ಬೆಲೆಗಳ ಸಾಪೇಕ್ಷ ಬದಲಾವಣೆ, ಹೊಸ ವಸ್ತುಗಳು ಮತ್ತು ಅಭಿರುಚಿಗಳಲ್ಲಿ ಬದಲಾವಣೆಗಳ ಪರಿಣಾಮ ಇವನ್ನು ನಿರ್ಲಕ್ಷಿಸುವ ವಿಧಾನಕ್ಕೆ ಸಾರ್ವತ್ರಿಕ ಪರ್ಯಾಯವಿಲ್ಲ. 

	ಯಾವುದೇ ಖಚಿತ ಉದ್ಯೋಗದಲ್ಲಿರುವ ಅಥವಾ ಖಚಿತ ವಿಸ್ತೀರ್ಣದಲ್ಲಿ ವಾಸಿಸುವ ಜನರ ಗುಂಪೊಂದನ್ನು ನಿಖರವಾಗಿ ವ್ಯಾಖ್ಯಿಸಬಹುದಾದರೆ ಅಂಥ ಗುಂಪು ಚಾಲ್ತಿಯಾಗಿ ಖರೀದಿಸುವ ವಸ್ತುಗಳ ವೆಚ್ಚವನ್ನು ವ್ಯಾವಹರಿಕವಾಗಿ ಅಳೆಯುವುದಕ್ಕೆ ಅಡಚಣೆಗಳೇನೂ ಇಲ್ಲ. ಆದರೆ ಆದಾಯದ ಮೇಲೆ ಹೊಂದಿಕೊಂಡಿರುವ ಯಾವುದೇ ವ್ಯಾಖ್ಯೆಗೆ ಗಂಭೀರ ಅಡ್ಡಿಯಿದೆ; ನಿಜ ಆದಾಯವನ್ನು ಬಳಸಿಕೊಳ್ಳುವ ವ್ಯಾಖ್ಯೆ ಮೇಲೆನ ಸುಳಿಯಲ್ಲೇ ನಮ್ಮನ್ನು ಸಿಕ್ಕಿಸುತ್ತದೆ. ಪರ್ಯಾಯವಾಗಿ ಹಣ ಆದಾಯವನ್ನು ಬಳಸುವ ವ್ಯಾಖ್ಯೆಗೆ, ಏರುತ್ತಿರುವ ಬೆಲೆಗಳ ಕಾಲದಲ್ಲಿ ಇಳಿಯುತ್ತಿರುವ ಆರ್ಥಿಕ ಕಲ್ಯಾಣಮಟ್ಟವುಳ್ಳ ಮತ್ತು ತದ್ವಿರುದ್ಧ ಕಾಲದಲ್ಲಿ ಏರುತ್ತಿರುವ ಅಂಥ ಮಟ್ಟವುಳ್ಳ ಗುಂಪೊಂದನ್ನು ನಿರ್ದೇಶಿಸುತ್ತದೆ.

4. ಎರಡು ಬೇರೆ ಬೇರೆ ಸ್ಥಳ ಅಥವಾ ವಿಸ್ತೀರ್ಣಗಳಲ್ಲಿ ಸಮಕಾಲೀನವಾಗಿ ವಾಸಿಸುವ ಒಂದೇ ರೀತಿಯ ಆರ್ಥಿಕವರ್ಗಗಳ ಜೀವನವೆಚ್ಚಗಳನ್ನು ಹೋಲಿಸುವುದು. ವಸ್ತುಗಳ ಖಚಿತ ಸಮುದಾಯದ ವೆಚ್ಚವನ್ನು ಇಲ್ಲಿ ಗಣಿಸಬೇಕೆಂಬುದು ಸ್ಪಷ್ಟ. ಆದರೆ ಒಂದು ಸಮಸ್ಯೆ. ಮೊದಲನೆಯ ಜಾಗಕ್ಕೆ ಅಥವಾ ಎರಡನೆಯ ಜಾಗಕ್ಕೆ ಅನುರೂಪವಾದ ಸಮುದಾಯವನ್ನು ಗಮನಿಸಬೇಕೆ? ಅಥವಾ ಅವೆರಡರ ಒಂದು ತರಹದ ಸರಾಸರಿಯನ್ನು ಗಮನಿಸಬೇಕೆ? ಇವುಗಳ ಪೈಕಿ ಪ್ರತಿಯೊಂದು ವಿಧಾನವೂ ಸಿಂಧುವಾಗಿದೆ. ಆದರೆ ದೊರೆಯುವ ಉತ್ತರಗಳು ಮಾತ್ರ ಬೇರೆಬೇರೆ; ಮತ್ತು ಕೆಲವೊಮ್ಮೆ ಈ ಉತ್ತರಗಳು ಒಂದಕ್ಕೊಂದು ತಿಕ್ಕಾಡಲೂಬಹುದು.

5. ಎರಡನೆಯ ಮಹಾಯುದ್ಧದ ಕಾಲದಲ್ಲಿ ಮತ್ತು ಇತ್ತೀಚೆಗೆ ಸಂಯುಕ್ತಸಂಸ್ಥಾನಗಳಲ್ಲಿ ಜೀವನವೆಚ್ಚದ ಮಾಪನಗಳನ್ನು ಬೆಲೆ ನಿಯಂತ್ರಣಗಳ ಪರಿಣಾಮಕಾರಿತ್ವದ ಸೂಚಕಗಳಾಗಿ ಬಳಸಿದುದೂ ಉಂಟು. ಎರಡು ಬೇರೆ ಬೇರೆ ಕಾಲಗಳಲ್ಲಿ ಬೆಲೆ ನಿರ್ಧರಿಸಬೇಕಾದ ವಸ್ತುಸಮುದಾಯದ ಘಟಕಗಳು ಕೆಲವೊಂದು ತೊಂದರೆಗಳನ್ನು ಒಡ್ಡಬಹುದು :

(i) ಒಂದೊಮ್ಮೆ ಹಣ ಕೊಟ್ಟು ಕೊಳ್ಳಬೇಕಾಗಿದ್ದ ವಸ್ತುಗಳನ್ನು ಚಾಲ್ತಿಯಲ್ಲಿ ಸರ್ಕಾರ ಉಚಿತವಾಗಿ ಜನರಿಗೆ ಒದಗಿಸಬಹುದು. ಉದಾಹರಣೆಗೆ, ಆಸ್ಪತ್ರೆ ಮತ್ತು ವೈದ್ಯಕೀಯ ನೆರವು, ಉನ್ನತ ವ್ಯಾಸಂಗ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟ, ಸಾರ್ವಜನಿಕ ವಾಚನಾಲಯ, ಆಟದ ಮೈದಾನ, ಈಜುಕೊಳ, ಹೂತೋಟ, ಮನೋರಂಜನೆಯ ವ್ಯವಸ್ಥೆ ಇತ್ಯಾದಿ.

(ii) ತೆರಿಗೆಗಳು ಅವುಗಳ ಸ್ವರೂಪವನ್ನು ಅವಲಂಬಿಸಿ ಬೇರೆಬೇರೆ ರೀತಿ ಇರುತ್ತವೆ. ಚಿಲ್ಲರೆ ವ್ಯಾಪಾರದ ತೆರಿಗೆಗಳನ್ನು ವಸ್ತುಗಳ ಖರೀದಿಸಮಯದಲ್ಲಿ ಬೆಲೆಗಳಿಗೆ ಸೇರಿಸುವುದರಿಂದ ಅವು ತತ್‍ಕ್ಷಣ ನೇರವಾಗಿ ಜೀವನವೆಚ್ಚದ ಅಧಿಕೃತ ಮಾನಗಳಲ್ಲಿ ಸೇರಿಕೊಳ್ಳುತ್ತವೆ. ಆದರೆ ಹೆಚ್ಚುಕಡಿಮೆ ಎಲ್ಲ ದೇಶಗಳಲ್ಲಿ ಆದಾಯಕರವನ್ನು ಅಂಥ ಮಾನಗಳಿಂದ ಹೊರತುಪಡಿಸುವುದೇ ರೂಢಿ. ಕಾಲಾನುಕ್ರಮದಲ್ಲಿ ಅದು ಕೂಡ ಪೂರ್ಣವಾಗಿ ಅಥವಾ ಭಾಗಶಃ ಏರಿದ ಬೆಲೆಗಳ ರೂಪದಲ್ಲಿ ಬಳಕೆದಾರನಿಗೆ ಬಂದು ಸೇರಬಹುದು.

	ಮಾಪನ ವಿಧಾನಗಳು : ಚಿಲ್ಲರೆ ವ್ಯಾಪಾರಬೆಲೆಗಳ ಸೂಚಿಯನ್ನು ಗಣಿಸಬೇಕಾಗಿರುವ ಜನರ ಆರ್ಥಿಕವರ್ಗದ ಕುಟುಂಬ ಮುಂಗಡ ಪತ್ರದ ಅಧ್ಯಯನ ನಡೆಸುವುದು ಮೊದಲ ಹಂತ. ಈ ಆರ್ಥಿಕವರ್ಗವನ್ನು ಜಾಗರೂಕತೆಯಿಂದ ವ್ಯಾಖ್ಯಿಸಿ ಅದರ ಪ್ರತಿನಿಧಿಯಾಗಿರುವ ಒಂದು ಯಾದೃಚ್ಛಿಕ ಪ್ರತಿಚಯವನ್ನು (ಸ್ಯಾಂಪಲ್) ಪಡೆಯಬೇಕು. ಕೆಲವು ಖಚಿತ ಅವಧಿಗಳಲ್ಲಿ ತಮ್ಮ ಖರ್ಚಿನ ವಿವರಗಳನ್ನು ಗುರುತಿಸಿಕೊಳ್ಳಲು ಈ ಆಯ್ದ ಕುಟುಂಬಗಳನ್ನು ಕೇಳಿಕೊಳ್ಳಲಾಗುತ್ತದೆ. ಖರ್ಚಿನ ಸ್ವರೂಪಕ್ಕೆ ಅನುಸಾರವಾಗಿ ಅವಧಿಗಳ ಉದ್ದದಲ್ಲಿ ವ್ಯತ್ಯಾಸವಿರಬಹುದು. 

ಈ ರೀತಿ ಸಂಗ್ರಹಿಸಲಾದ ಮಾಹಿತಿಯಲ್ಲಿ ಖರ್ಚಿನ ಕೆಲವು ಬಾಬ್ತುಗಳನ್ನು ಕೈಬಿಡುವುದು ವ್ಯಾವಹಾರಿಕ ರೂಢಿ. ಜೀವವಿಮೆ ಕಂತು, ಕಾರ್ಮಿಕಸಂಘಗಳಿಗೆ ಚಂದ, ಧಾರ್ಮಿಕಸಂಸ್ಥೆಗಳಿಗೆ ಸಹಾಯ, ನಗದು ಬಹುಮಾನಗಳು, ಜೂಜಿನ ಖರ್ಚು ಇತ್ಯಾದಿಗಳನ್ನು ಕಡೆಗಣಿಸುವುದು ಸಾಮಾನ್ಯ. ಸ್ಥೂಲವಾಗಿ ಒಂದೇ ರೀತಿಯ ಬೆಲೆ ಚಲನವುಳ್ಳ ವಸ್ತುಗಳು ಒಟ್ಟೊಟ್ಟಿಗೆ ಇರುವಂತೆ ಖರ್ಚಿನ ಉಳಿದ ಬಾಬ್ತುಗಳನ್ನು ವಿಭಾಗಿಸಲಾಗುವುದು. ಬಳಿಕ ಈ ವಿಭಾಗಗಳನ್ನು ಒಂದೇ ರೀತಿಯ ಸಾರ್ವತ್ರಿಕ ಸ್ವರೂಪವುಳ್ಳ ವೃಂದಗಳಲ್ಲಿ ಸೇರಿಸಲಾದ ವಸ್ತುಗಳಿಗೆ ಸಂಬಂಧಿಸಿದಂತೆ ಈ ವರ್ಗದ ಜನರ ಒಟ್ಟು ಖರ್ಚನ್ನು ಬಳಿಕ ಗಣಿಸಲಾಗುವುದು. ಈ ಸಂದರ್ಭದಲ್ಲಿ ಗಮನಿಸಬೇಕಾದ ಹಲವು ವಿಚಾರಗಳಿವೆ :

	(i) ಬೆಲೆಯನ್ನು ಕುರಿತು ಉತ್ತಮ ಮಾಹಿತಿಯುಳ್ಳ ಮತ್ತು ವರ್ಗದಲ್ಲಿರುವ ಎಲ್ಲ ವಸ್ತುಗಳ ಬೆಲೆಚಲನೆಗೆ ಮಾದರಿಯಾಗಿರುವ ವಸ್ತುಗಳನ್ನು ಪ್ರತಿಯೊಂದು ವಿಭಾಗದಿಂದಲೂ ಆಯಬೇಕು. ಈ ನಿಬಂಧನೆಗಳನ್ನು ತೃಪ್ತಿಪಡಿಸುವ ವಸ್ತುಗಳನ್ನು ಸಾಧ್ಯವಾದಷ್ಟು ನಿಖರವಾಗಿ ಸೂಕ್ತ ಮಧ್ಯಾಂತರಗಳಲ್ಲಿ (ಹೆಚ್ಚಾಗಿ ತಿಂಗಳಿಗೊಮ್ಮೆ) ಅವುಗಳ ಬೆಲೆಗಳನ್ನು ತಿಳಿಯಲು ವ್ಯವಸ್ಥೆ ಮಾಡಬೇಕು.

	(ii) ಮದ್ಯ, ತಂಬಾಕು ಇತ್ಯಾದಿಯನ್ನು ಕುರಿತ ಖರ್ಚನ್ನು ಜನರು ಇಳಿಸಿ ತಿಳಿಸುವುದೇ ಹೆಚ್ಚು. ಆದ್ದರಿಂದ ಪರಿಸ್ಥಿತಿ ಅಂಥದಿದೆಯೆಂದು ನಂಬಲು ಅರ್ಹ ಪುರಾವೆಯಿದ್ದಾಗ ಅನುರೂಪ ಖರ್ಚುಗಳಲ್ಲಿ ಅವಶ್ಯ ತೋರುವ ಮಾರ್ಪಾಡು ಮಾಡಿಕೊಳ್ಳಬೇಕು.

(iii) ಪೂರೈಕೆಗಳಲ್ಲಿ ಪಾರ್ವಣ ಏರಿಳಿತಗಳನ್ನು ತಾಜಾಹಣ್ಣು ಮತ್ತು ತರಕಾರಿಗಳಂಥ ವಸ್ತುಗಳ ಸಂಬಂಧದಲ್ಲಿ ಕೆಲವು ತೊಡಕುಗಳು ಉದ್ಭವಿಸುತ್ತವೆ. ಎರಡನೆಯ ಮಹಾಯುದ್ಧಕ್ಕಿಂತ ಮೊದಲು ಈ ವಸ್ತುಗಳ ಖರ್ಚನ್ನು ಪೂರ್ಣವಾಗಿ ಬಿಟ್ಟುಬಿಡುವುದೇ ರೂಢಿಯಾಗಿತ್ತು. ಬಳಿಕ ಈ ಸಮಸ್ಯೆಯನ್ನು ಪರಿಹರಿಸಲು ಬೇರೆಬೇರೆ ಕ್ರಮಗಳನ್ನು ಕೈಗೊಳ್ಳಲು ಆರಂಭವಾಯಿತು. ಅವುಗಳ ಪೈಕಿ ಒಂದು ಹೀಗಿದೆ: ಸ್ವೀಡನ್ ದೇಶದಲ್ಲಿ 1941ರಿಂದ ಮೊದಲ್ಗೊಂಡು ಹೊಸಬೆಳೆ ಮಾರುಕಟ್ಟೆಗೆ ಬಂದ ತಿಂಗಳಲ್ಲಿ ಅದರಲ್ಲಿರುವ ಬೆಲೆಯನ್ನು ಚಾಲ್ತಿಬೆಲೆಯಾಗಿ ತೆಗೆದುಕೊಳ್ಳುವುದಿತ್ತು. ಎರಡನೆಯ ತಿಂಗಳಲ್ಲಿ ಅದರ ಮತ್ತು ಹಿಂದಿನ ತಿಂಗಳ ಬೆಲೆಗಳ ಸರಾಸರಿಯನ್ನು ಬಳಸಲಾಗುತ್ತಿತ್ತು. ಮೂರನೆಯ ತಿಂಗಳಲ್ಲಿ ಆ ಮೂರು ತಿಂಗಳುಗಳ ಬೆಲೆಗಳ ಸರಾಸರಿಯನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು; ಇದೇ ರೀತಿ ಆರು ತಿಂಗಳುಗಳವರೆಗೆ ಮುಂದುವರಿಸಲಾಗುತ್ತಿತ್ತು. ಆರನೆಯ ತಿಂಗಳಲ್ಲಿ ಬಳಸಿದ ಬೆಲೆಯನ್ನು ಬದಲಾವಣೆಯಿಲ್ಲದೆ ಮುಂದೆ ಮತ್ತಿನ ಹೊಸಬೆಳೆಯ ಆಗಮನದವರೆಗೆ ಉಪಯೋಗಿಸಲಾಗುತ್ತಿತ್ತು. ಇಂಥ ವಸ್ತುಗಳನ್ನು ಬೇಕಾದಾಗ ಕೊಳ್ಳುವ ಅಥವಾ ಕೆಲವು ತಿಂಗಳುಗಳ ಮುಂಚಿತವಾಗಿಯೇ ಕೊಂಡು ಶೇಖರಿಸಿ ಭವಿಷ್ಯದಲ್ಲಿ ಬಳಸುವ ಸ್ವಾತಂತ್ರ್ಯ ಗೃಹಿಣಿಗೆ ಇದೆಯೆಂದು ತಿಳಿಯಬಹುದಾದರೆ ಈ ವಿಧಾನ ಸಮ್ಮತ.

	(iv) ಹೊಸನಮೂನೆಯ ಒಂದು ವಸ್ತು ಪ್ರಚಲಿತವಾಗಿ ಹಳೆನಮೂನೆಯ ವಸ್ತು ಸಿಗದಂತಾಗುವಾಗ ವಸ್ತುಗುಣದಲ್ಲಾದ ಬದಲಾವಣೆಯನ್ನು ಗಮನಿಸಲು ಯತ್ನ ಮಾಡಬೇಕು. ಹಳೆ ವಸ್ತುವಿನಷ್ಟೇ ಸುಗಮವಾಗಿ ಹೊಸವಸ್ತು ಮಾರಾಟವಾಗಲು ಅದಕ್ಕೆ ಯಾವ ಬೆಲೆ ನಿಗದಿಮಾಡಬೇಕೆಂಬುದನ್ನು ಅಂದಾಜಿಸಲು ಚಿಲ್ಲರೆವ್ಯಾಪಾರಿಗಳನ್ನು ಕೇಳಿ ಅದನ್ನು ಬಳಸುವುದು ಒಂದು ಸಾಧ್ಯ ಪರಿಹಾರ.

	(v) ಬೆಲೆನಿಯಂತ್ರಣ ಅಥವಾ ಹಸುಗೆಪದ್ಧತಿ ಜಾರಿಯಲ್ಲಿದ್ದು ಯಾವುದೇ ವಸ್ತುವಿನಲ್ಲಿ ಲಕ್ಷ್ಯಾರ್ಹವಾಗಿ ಕಾಳಸಂತೆ ಇರುವಾಗ ಮತ್ತು ಅನುರೂಪವಾದ ಬೆಲೆಗಳನ್ನು ಸಾಕಷ್ಟು ನಿಖರವಾಗಿ ತಿಳಿಯಲು ಬರುವಾಗ ಇಂಥ ಪರಿಸ್ಥಿತಿಯನ್ನು ವಸ್ತುಬೆಲೆಗಳು ಪ್ರತಿಬಿಂಬಿಸಬೇಕು. 
	ಆಯ್ದ ದೇಶಗಳಲ್ಲಿ ಜೀವನವೆಚ್ಚದ (1957-70ರ) ಅವಧಿಯಲ್ಲಿ ಸಾಪೇಕ್ಷ ಚಲನೆಯನ್ನು ಕೆಳಗಿನ ಕೋಷ್ಟಕ ತೋರಿಸುತ್ತದೆ. 
1963 : 100

ದೇಶ( 
ವರ್ಷ(
1957
1962
1967
1968
1969
1970

ಆಸ್ಟ್ರೇಲಿಯ
91
99
113
116
120
124

ಭಾರತ (ಮುಂಬಯಿ)
82
97
156
160
175
184

ಬ್ರಿಟನ್
87
98
115
121
127
135

ಜಪಾನ್
79
93
121
128
134
144

ಜರ್ಮನಿ, ಪಶ್ಚಿಮ
87
97
111
113
116
121

ಸಂಯುಕ್ತ ಸಂಸ್ಥಾನಗಳು
92
99
109
114
120
127

										(ಎಸ್.ಟಿ)

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ